ದೇಸಾಯಿ, ಮುರಾರ್ಜಿರಣ್ಫೋಡ್ಜಿ
1896-1995. ಭಾರತದ ಪ್ರಧಾನಿ (1977-1979) ಗಾಂಧಿವಾದಿ. 1896ರ ಫೆಬ್ರುವರಿ 29ರಂದು ಸೂರತ್ ಜಿಲ್ಲೆಯಲ್ಲಿ ವಲಸಾಡ್ ಬಳಿಯ ಭಡೇಲಿ ಗ್ರಾಮದಲ್ಲಿ ಮಧ್ಯಮ ವರ್ಗದ ಅನಾವಿಲ್ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ತಂದೆರಣ್ಛೋಡ್ಜಿ ಶಾಲಾ ಶಿಕ್ಷಕ ಮತ್ತು ಶಿಸ್ತಿನ ಸಾಕಾರ. ತಾಯಿ ವಾಜಿಬೇನ್. ಆ ದಂಪತಿಗಳ ಎಂಟು ಮಕ್ಕಳಲ್ಲಿ ಇವರೇ ಹಿರಿಯರು. ಇವರಿಗೆ ಹದಿನೈದು ವರ್ಷ ಆಗಿದ್ದಾಗ ಕಂದಾಯ ಅಧಿಕಾರಿಯೊಬ್ಬರ ಹನ್ನೊಂದು ವರ್ಷದ ಪುತ್ರಿ ಗಜರಾ ಬೆನ್‍ರೊಂದಿಗೆ ಇವರ ವಿವಾಹವಾಯಿತು. ವಿವಾಹಕ್ಕೆ ಮೂರು ದಿನಗಳ ಹಿಂದೆ ತಂದೆರಣ್ಛೋಡ್ಜಿ ಕಾಲವಾದರು. ಈ ದುರಂತದಿಂದ ಪತ್ನಿ, ಅಜ್ಜಿ, ತಾಯಿ, ಮೂವರು ತಮ್ಮಂದಿರು ಹಾಗೂ ನಾಲ್ಕು ತಂಗಿಯರ ದೊಡ್ಡ ಕುಟುಂಬದ ಭಾರ ಇವರ ಮೇಲೆ ಬಿತ್ತು. ಆದರೂ ಇವರು ಧೃತಿಗೆಡದೇ ಓದನ್ನು ಮುಂದುವರಿಸಿ ಮೆಟ್ರಿಕ್ಯುಲೇಷನ್ನಿನಲ್ಲಿ ನಲವತ್ತೈದನೆಯ ಸ್ಥಾನ ಪಡೆದು ಉತ್ತೀರ್ಣರಾದರು. ಅನಂತರ ಭಾವನಗರದ ಮಹಾರಾಜರ ವಿದ್ಯಾರ್ಥಿವೇತನ ಪಡೆದು ಉಚಿತ ಭೋಜನ ಗೃಹದಲ್ಲಿ ಉಳಿದುಕೊಂಡು ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿ ವಿe್ಞÁನದಲ್ಲಿ ಪ್ರಥಮ ವರ್ಗದ ಆನರ್ಸ್ ಪಡೆದು ಪದವೀಧರರಾದರು. ಒಂದು ವರ್ಷದ ಅನಂತರ 1918ರಲ್ಲಿ ಮುಂಬಯಿ ಪ್ರಾಂತ್ಯದ ಸಿವಿಲ್ ಸೇವೆಯನ್ನು ಸೇರಿ 12 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು. ಮಹಾತ್ಮ ಗಾಂಧೀಜಿಯವರ ಬರೆಹಗಳಿಂದ ಪ್ರಭಾವಿತರಾಗಿ ಖಾದಿ ಧರಿಸತೊಡಗಿದ್ದ ಇವರು, ಸರ್ಕಾರಿ ನೌಕರರು ತಮ್ಮ ನೌಕರಿಗಳಿಗೆ ರಾಜೀನಾಮೆ ನೀಡಬೇಕೆಂದು ಗಾಂಧಿಯವರು ಕರೆಕೊಟ್ಟಾಗ ಡೆಪ್ಯುಟಿ ಕಲೆಕ್ಟರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ರಾಷ್ಟ್ರೀಯ ಚಳವಳಿಯಲ್ಲಿ ಧುಮುಕಿದರು(1930). 1931ರಲ್ಲಿ ಇವರು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಸಮಿತಿಯ ಅಧ್ಯಕ್ಷರು ಕರನಿರಾಕರಣ ಚಳವಳಿಯಲ್ಲಿ ಭಾಗವಹಿಸಿ ದಸ್ತಗಿರಿಯಾದರು. ಅವರ ಸ್ಥಾನದಲ್ಲಿ ಅಧಿಕಾರ ವಹಿಸಿಕೊಂಡ ಮುರಾರ್ಜಿಯವರೂ ಬಂಧನಕ್ಕೆ ಒಳಗಾದರು. 1931 - 1937ರಲ್ಲೂ 1939-1946ರಲ್ಲೂ ಇವರು ಆ ಸಮಿತಿಯ ಕಾರ್ಯದರ್ಶಿಯಾಗಿದ್ದರು. 1931ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾದರು. 1950 ರಿಂದ 1958ರ ವರೆಗೆ ಆ ಸಂಸ್ಥೆಯ ಖಜಾಂಚಿಯಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುಗೊಂಡಿದ್ದಕ್ಕಾಗಿ ಇವರು 1930 - 1934ರಲ್ಲಿ ಮೂರು ಸಲ ಜೈಲು ಶಿಕ್ಷೆ ಅನುಭವಿಸಿದರು.

1935ರ ಭಾರತ ಸರ್ಕಾರ ಅಧಿನಿಯಮದ ಪ್ರಕಾರ ಪ್ರಾಂತ್ಯಗಳಿಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದಾಗ ಇವರೂ ಒಬ್ಬ ಅಭ್ಯರ್ಥಿಯಾಗಿ ಮುಂಬಯಿ ವಿಧಾನ ಸಭೆಗೆ ಚುನಾಯಿತರಾದರು. ಬಿ. ಜಿ. ಖೇರ್ ಮಂತ್ರಿ ಮಂಡಲರಚಿತವಾದಾಗ ಇವರು ಕಂದಾಯ, ಸಹಕಾರ, ಕೃಷಿ ಮತ್ತು ಅರಣ್ಯ ಖಾತೆಗಳ ಮಂತ್ರಿಯಾದರು. 1939ರಲ್ಲಿ ಪ್ರಾಂತೀಯ ಸರ್ಕಾರಗಳಿಂದ ಕಾಂಗ್ರೆಸ್ಸು ಹೊರಬಂತು. ಮುಂಬಯಿ ಪ್ರಾಂತ್ಯದಲ್ಲೂ ಕಾಂಗ್ರೆಸ್ ಸರ್ಕಾರ ಅಂತ್ಯಗೊಂಡಿತು. ಮುರಾರ್ಜಿ ದೇಸಾಯಿಯವರು ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸಿದರು. 1942- 1945ರಲ್ಲಿ ಇವರು ಸ್ಥಾನಬದ್ಧತೆಯಲ್ಲಿದ್ದರು. 1946ರಲ್ಲಿ ಇವರು ಮುಂಬಯಿಯ ವಿಧಾನ ಸಭೆಗೆ ಆಯ್ಕೆಗೊಂಡು ಖೇರ್ ಅವರ ಸಂಪುಟದಲ್ಲಿ ಗೃಹ ಮತ್ತು ಕಂದಾಯ ಮಂತ್ರಿಯಾದರು (1946-1952). ಆಗಲೇ ರಾಷ್ಟ್ರದ ಗಮನ ಇವರತ್ತ ಹರಿಯಿತು. ಇವರು ಪೂರ್ಣ ಪಾನ ನಿರೋಧವನ್ನು ಜಾರಿಗೆ ತಂದರು. ಚಲನಚಿತ್ರಗಳಲ್ಲಿ ಚುಂಬನ ದೃಶ್ಯಗಳನ್ನು ಪ್ರತಿಬಂಧಿಸಲಾಯಿತು. ಮಧ್ಯರಾತ್ರಿಗೆ ಮುಂಚಿತವಾಗಿ ಹೋಟಲುಗಳನ್ನು ಮುಚ್ಚಬೇಕೆಂಬ ಆಜ್ಞೆ ಜಾರಿಗೆ ಬಂತು. ಸ್ತ್ರೀಯರು ಪ್ರಸಾಧನ ಸಾಮಗ್ರಿಯನ್ನು ಬಳಸುವುದನ್ನು ಇವರು ವಿರೋಧಿಸಿದರು. ವಿದ್ಯಾರ್ಥಿಗಳು ಹಳೆಯ ಕಾಲದ ಲೇಖನಿಗಳನ್ನು ಬಳಸಬೇಕೆಂಬುದು ಇವರ ಇಚ್ಛೆಯಾಗಿತ್ತು. ಮುಂಬಯಿನಗರದ ವೇಶ್ಯಾಗೃಹಗಳ ನಿರ್ಮೂಲನಕ್ಕೂ ಇವರು ಪ್ರಯತ್ನಿಸಿದರು. ಜನತೆಯ ನೈತಿಕ ಮಟ್ಟವನ್ನು ಹೆಚ್ಚಿಸುವುದೇ ಇವರು ಕೈಗೊಂಡ ಇಂಥ ವಿವಾದಾಸ್ಪದ ಹಾಗೂ ಅಷ್ಟೇನೂ ಜನಪ್ರಿಯವಾಗದ ಈ ಕ್ರಮಗಳ ಉದ್ದೇಶ. ಮುರಾರ್ಜಿ ದೇಸಾಯಿಯವರು ದೀರ್ಘಕಾಲಿಕ ಪರಿಣಾಮದ ಭೂ ಗೇಣಿ ಸುಧಾರಣೆಗಳನ್ನು ಜಾರಿಗೆ ತಂದರು. ಪೋಲೀಸ್ ವ್ಯವಸ್ಥೆಯನ್ನು ಸಮೂಲವಾಗಿ ಬದಲಾಯಿಸಿದರು. ನ್ಯಾಯಾಂಗವನ್ನು ರಾಜ್ಯದ ಕಾರ್ಯಂಗದಿಂದ ಬೇರ್ಪಡಿಸಿದರು. 1948ರ ಜನವರಿ 30ರಂದು ನಡೆದ ಮಹಾತ್ಮ ಗಾಂಧಿಯವರ ಹತ್ಯೆಯ ಸಂಚಿನ ಬಗ್ಗೆ ಜೆ.ಸಿ. ಜೈನರು ಇವರಿಗೆ ಸುಳಿವು ಕೊಟ್ಟರೂ ಇವರು ಆ ಸಂಚನ್ನು ಹೊರಗೆಡಹಲು ವಿಫಲವಾದರೆಂದು ಇವರನ್ನು ಆಕ್ಷೇಪಿಸಲಾಯಿತು. ಆದರೆ ದೇಸಾಯಿಯವರು ಕರ್ತವ್ಯಲೋಪ ಮಾಡಲಿಲ್ಲವೆಂಬುದಾಗಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ತೀರ್ಪು ನುಡಿದರು. ಅಪೀಲಿನ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಎರಡು ದಶಕಗಳ ಅನಂತರ ನೇಮಕಗೊಂಡ ಜೆ. ಎಲ್. ಕಪೂರ್ ತನಿಖೆ ಆಯೋಗ ದೇಸಾಯಿಯವರ ಪರವಾಗಿಯೇ ನಿರ್ಣಯ ನುಡಿದಿವೆ. ಗೃಹಸಚಿವರಾಗಿ ಇವರು ಮಾಡಬೇಕಾದುದ್ದೆಲ್ಲವನ್ನೂ ಮಾಡಿದ್ದರೆಂದೂ ಅವು ಹೇಳಿದ ಕೆಲವು ಸಂದೇಹಾಸ್ಪದ ವ್ಯಕ್ತಿಗಳ ದಸ್ತಗಿರಿಗಾಗಿ ಆಜ್ಞೆ ಹೊರಡಿಸಿದ್ದರು. ಸಂಚಿನ ತನಿಖೆಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರಲ್ಲದೆ ಕೇಂದ್ರದ ಗೃಹ ಮಂತ್ರಿಯಾಗಿದ್ದ ಸರದಾರ್ ಪಟೇಲರಿಗೂ ಅವಶ್ಯ ಮಾಹಿತಿ ನೀಡಿದ್ದರು.

1952ರ ಚುನಾವಣೆಗಳ ಅನಂತರ ಮುಂಬಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಖೇರರು ನಿವೃತ್ತರಾದಾಗ ಮುರಾರ್ಜಿಯವರು ಚುನಾವಣೆಯಲ್ಲಿ ಸೋತಿದ್ದರೂ ಮುಖ್ಯಮಂತ್ರಿಯಾದರು. (1952 - 1956.) ಅನಂತರ ವಿಧಾನ ಪರಿಷತ್ತಿಗೆ ಅವರ ಆಯ್ಕೆಯಾಯಿತು. ಮುಂಬಯಿ ಪ್ರಾಂತ್ಯದ ಭಾಷಾವಾರು ವಿಭಜನೆಯನ್ನು ಇವರು ತೀವ್ರವಾಗಿ ವಿರೋಧಿಸಿದರು. ಸಂಯುಕ್ತ ಮಹಾರಾಷ್ಟ್ರದ ಆಂದೋಲನವನ್ನು ಹತ್ತಿಕ್ಕಲು ಯತ್ನಿಸಿದರು. ಮೂರು ವರ್ಷಗಳ ಅನಂತರ ಪ್ರಾಂತ್ಯದ ವಿಭಜನೆಯಾದಾಗ ಮುರಾರ್ಜಿ ದೇಸಾಯಿಯವರು ಮಂತ್ರಿ ಪದವಿಗೆ ರಾಜೀನಾಮೆ ನೀಡಿ 1956 ನವೆಂಬರ್ 1ರಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಮಂತ್ರಿಯಾದರು. 1958ರ ಮಾರ್ಚ್ 22ರಂದು ಹಣಕಾಸಿನ ಮಂತ್ರಿಯಾದರು. 1962ರಲ್ಲಿ ಸೂರತ್ ಚುನಾವಣಾ ಕ್ಷೇತ್ರದಿಂದ ಲೋಕ ಸಭೆಗೆ ಆಯ್ಕೆಗೊಂಡು ಮತ್ತೆ ಹಣಕಾಸಿನ ಮಂತ್ರಿಯಾಗಿ ಮುಂದುವರೆದರು.

ಮುರಾರ್ಜಿ ದೇಸಾಯಿಯವರು ಹಣಕಾಸು ಮಂತ್ರಿಯಾಗಿದ್ದಾಗ ಅನೇಕ ಆರ್ಥಿಕ ಕ್ರಮಗಳು ಜಾರಿಗೆ ಬಂದುವು. ಇವುಗಳಲ್ಲಿ ಕೆಲವು ವಿವಾದಾಸ್ಪದವಾಗಿದ್ದುವು. ವರಮಾನ ತೆರಿಗೆದಾರರ ಕಡ್ಡಾಯ ಠೇವಣಿ ಕ್ರಮ, ಬಂಗಾರ ನಿಯಂತ್ರಣ ಆಜ್ಞೆ ಮೊದಲಾದ ಕ್ರಮಗಳು ಅಷ್ಟು ಜನಪ್ರಿಯವಾಗಿರಲಿಲ್ಲ. ಇವು ಸಂಪುಟದ ಸಂಯುಕ್ತ ಹೊಣೆಯೆಂದೂ ತಾವು ಇದಕ್ಕೆ ವೈಯಕ್ತಿಕ ಜವಾಬುದಾರರಲ್ಲವೆಂದೂ ಇವರು ತಮ್ಮನ್ನು ಆಕ್ಷೇಪಿಸಿದವರಿಗೆ ಉತ್ತರವಿತ್ತಿದ್ದಾರೆ.

1963ರ ಆಗಸ್ಟ್‍ನಲ್ಲಿ ನೆಹರೂ ಘೋಷಿಸಿದ ಕಾಮರಾಜ ಯೋಜನೆಗೆ ಅನುಸಾರವಾಗಿ ಮುರಾರ್ಜಿ ದೇಸಾಯಿಯವರು ಮಂತ್ರಿ ಪದವಿಗೆ ರಾಜಿನಾಮೆಯಿತ್ತರು. ನೆಹರೂ ಅವರ ನಿಧನದ ನಂತರ ಲಾಲ್ ಬಹಾದುರ್ ಶಾಸ್ತ್ರಿಯವರು ಪ್ರಧಾನಿಯಾದರು. ಲಾಲ್ ಬಹಾದುರ್ ಶಾಸ್ತ್ರಿಯವರುರಚಿಸಿದ್ದ ಕೇಂದ್ರ ಸರ್ಕಾರದ ಆಡಳಿತ ಸುಧಾರಣಾ ಆಯೋಗಕ್ಕೆ ಅಧ್ಯಕ್ಷರಾಗಲು ಮುರಾರ್ಜಿ ದೇಸಾಯಿಯವರು ಒಪ್ಪಿಕೊಂಡಿದ್ದರು. ಲಾಲ್ ಬಹಾದ್ದುರ್ ತೀರಿಕೊಂಡ ಅನಂತರ ಪ್ರಧಾನಿ ಪದವಿಗೆ ಇಂದಿರಾ ಗಾಂಧಿಯವರೊಡನೆ ಸ್ಪರ್ಧಿಸಿದಾಗ ಇವರಿಗೆ ಸೋಲಾಯಿತು. 1966ರ ಮಾರ್ಚ್‍ನಲ್ಲಿ ಇವರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದರು. ಸಚಿವರ ವಿರುದ್ಧ ಆಪಾದನೆಗಳ ವಿಚಾರಣೆಗೆ ಲೋಕಪಾಲರ ಮತ್ತು ಲೋಕ ಆಯುಕ್ತರ ನೇಮಕ ಆಗಬೇಕೆಂದು ಇವರು ಶಿಫಾರಸು ಮಾಡಿದರು. 1967ರಲ್ಲಿ ಲೋಕ ಸಭೆಗೆ ಚುನಾಯಿತರಾಗಿ ಇಂದಿರಾ ಗಾಂಧಿಯವರ ಸಂಪುಟದಲ್ಲಿ ಉಪಪ್ರಧಾನಿ ಮತ್ತು ಹಣಕಾಸಿನ ಸಚಿವರಾದರು. ಆದರೆ ಪ್ರಧಾನಿ ಮತ್ತು ಉಪಪ್ರಧಾನಿಗಳಲ್ಲಿ ಭಿನ್ನಾಭಿಪ್ರಾಯಗಳು ತಲೆದೋರತೊಡಗಿದುವು. 1967ರ ಜೂನಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಂಗೀಕರಿಸಿದ ಹತ್ತು ಅಂಶಗಳಲ್ಲಿ ಒಂದಾಗಿದ್ದ ಮತ್ತು ಶ್ರೀಮತಿ ಗಾಂಧಿ ಸಮರ್ಥಿಸುತ್ತಿದ್ದ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಮುರಾರ್ಜಿ ದೇಸಾಯಿಯವರು ವಿರೋಧಿಸಿದರು. ರಾಷ್ಟ್ರಪತಿಯ ಪದವಿಗೆ ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿಯಾಗಿದ್ದ ಸಂಜೀವ ರೆಡ್ಡಿಯವರಿಗೆ ಪ್ರತಿಸ್ಪರ್ಧಿಯಾಗಿದ್ದ ವಿ. ವಿ. ಗಿರಿಯವರ ಉಮೇದುವಾರಿಕೆಯನ್ನು ಇಂದಿರಾ ಗಾಂಧಿಯವರು ಸಮರ್ಥಿಸಿದರಲ್ಲದೆ ದೇಸಾಯಿಯವರಿಂದ ಹಣಕಾಸಿನ ಖಾತೆಯನ್ನು ಹಿಂದೆಗೆದುಕೊಂಡರು. ಇದನ್ನು ಪ್ರತಿಭಟಿಸಿ ಮುರಾರ್ಜಿ ದೇಸಾಯಿಯವರು 1969ರ ಜುಲೈಯಲ್ಲಿ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟರು.

1969ರ ಕೊನೆಗೆ ಕಾಂಗ್ರೆಸ್ ಒಡೆದು ಎರಡಾದಾಗ ಮುರಾರ್ಜಿ ದೇಸಾಯಿಯವರು ಸಂಸ್ಥಾ ಕಾಂಗ್ರೆಸ್ಸಿನ ನಾಯಕರಲ್ಲೊಬ್ಬರಾದರು. 1971ರ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಗೊಂಡರು. 1974ರಲ್ಲಿ ಇವರು ಗುಜರಾತಿನ ರಾಜಕೀಯದ ಸಂಬಂಧದಲ್ಲಿ ಐದು ದಿನಗಳ ಉಪವಾಸ ಕೈಕೊಂಡರು. ಅನೇಕ ಕಾಂಗ್ರೆಸ್ ವಿಧಾನ ಸಭಾ ಸದಸ್ಯರು ರಾಜೀನಾಮೆಯಿತ್ತುದರಿಂದ ವಿದ್ಯಾರ್ಥಿಗಳು ಬೇಡುತ್ತಿದ್ದ ರಾಜ್ಯ ವಿಧಾನ ಸಭೆಯ ವಿಸರ್ಜನೆಗೆ ಶ್ರೀಮತಿ ಗಾಂಧಿ ಒಪ್ಪಿಗೆ ನೀಡಲೇಬೇಕಾಯಿತು. 1975ರ ಏಪ್ರಿಲ್ ನಲ್ಲಿ ಇವರು ಏಳು ದಿನಗಳ ಉಪವಾಸ ಕೈಗೊಂಡು ಗುಜರಾತಿನ ವಿಧಾನ ಸಭೆಯ ಚುನಾವಣೆ ಗೊತ್ತಾದ ದಿನಕ್ಕೆ ಮುಂಚೆಯೇ ನಡೆಯುವುದಕ್ಕೆ ಕಾರಣರಾದರು. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯಾದಾಗ ಇವರನ್ನು ಸುಮಾರು ಹತ್ತೊಂಬತ್ತು ತಿಂಗಳುಗಳ ಕಾಲ ಸ್ಥಾನಬದ್ಧತೆಯಲ್ಲಿಡಲಾಗಿತ್ತು. 1977ರ ಜನವರಿಯಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಯ ವಿಸರ್ಜನೆಗೆ ರಾಷ್ಟ್ರಪತಿಗೆ ಸಲಹೆ ನೀಡಿ ಚುನಾವಣೆಗಳನ್ನು ಘೋಷಿಸಿದಾಗ ಮುರಾರ್ಜಿ ದೇಸಾಯಿಯವರ ಬಿಡುಗಡೆಯಾಯಿತು. ಸಂಸ್ಥಾ ಕಾಂಗ್ರೆಸ್, ಜನ ಸಂಘ, ಸೋಷಿಯಲಿಸ್ಟ್ ಪಕ್ಷ ಮತ್ತು ಭಾರತೀಯ ಲೋಕ ದಳಗಳು ಒಂದಾಗಿರಚಿಸಲಾದ ಜನತಾ ಪಕ್ಷಕ್ಕೆ ಇವರು ಅಧ್ಯಕ್ಷರಾಗಿದ್ದರು. ಮಾರ್ಚ್‍ನಲ್ಲಿ ನಡೆದ ಚುನಾವಣೆಗಳಲ್ಲಿ ಜಯಗಳಿಸಿದರು. ಬಹುಮತ ಗಳಿಸಿದ ಜನತಾ ಪಕ್ಷದ ನಾಯಕರಾಗಿ ಮುರಾರ್ಜಿ ದೇಸಾಯಿಯವರು ಆಯ್ಕೆಗೊಂಡು ಭಾರತದ ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿಯಾದರು. ಜನತಾ ಪಕ್ಷದ ಗೆಲುವಿಗೆ ದೇಶಾದ್ಯಂತ ಚುನಾವಣಾಪ್ರಚಾರ ಕೈಗೊಂಡರು. ಇದಿರಾಳಿಗಳನ್ನು ಹಳಿಯದೆ ಘನ ಗಂಭೀರವಾಗಿ ಮಾತಾಡಿದರು. ಜನಕೋಟಿಯ ಹೃದಯ ಗೆದ್ದರು. ಪ್ರಧಾನಮಂತ್ರಯಾದರು. 1977ರ ಮಾರ್ಷಿ 24ರಂದು ಪ್ರಮಾಣವಚನ ಸ್ವೀಕರಿಸಿದರು. ಜುಲೈ 19ರವರೆಗೆ ಪ್ರಧಾನಿಯಾಗಿ ಮುಂದುವರೆದರು. ಜನನಿರ್ಭೀತರಾಗಿರಬೇಕು ಎಂಬುದೇ ಅವರ ಸಂದೇಶ. ದೇಶದ ಕಾನೂನಿನ ಮುಂದೆ ಯಾರೂ, ಪ್ರಧಾನಿಯೂ, ಹೆಚ್ಚಲ್ಲ-ಎಂಬುದೇ ಅವರ ಸೂತ್ರಪಾಠ.

ಮುರಾರ್ಜಿ ದೇಸಾಯಿಯವರು ಅನೇಕ ಸಲ ವಿದೇಶ ಪ್ರವಾಸ ಕೈಗೊಂಡಿದ್ದರು. ಗುಜರಾತ್ ವಿದ್ಯಾಪೀಠ, ಲೋಕಭಾರತಿ, ನವಜೀವನ ಟ್ರಸ್ಟ್, ಗಾಂಧಿ ಸ್ಮಾರಕ ನಿಧಿ ಮೊದಲಾದ ಹಲವಾರು ಶೈಕ್ಷಣಿಕ, ಸಾಂಸ್ಕøತಿಕ ಹಾಗು ಸಾಮಾಜಿಕ ಸಂಸ್ಥೆಗಳೊಡನೆ ಇವರು ನಿಕಟ ಸಂಬಂಧ ಇಟ್ಟುಕೊಂಡಿದ್ದರು.

ಮುರಾರ್ಜಿ ದೇಸಾಯಿಯವರ ವೈಯಕ್ತಿಕ ಜೀವನ ಪರಿಶುದ್ಧವಾದ್ದು. ಗಾಂಧೀಮಾರ್ಗದಲ್ಲಿ ಇವರಿಗೆ ಅಚಲನಂಬಿಕೆ. ತಮ್ಮ ನಿಲುವನ್ನು ಬಿಟ್ಟುಕೊಡದ ಇವರು ಹಟವಾದಿಯೆಂದು ಹಲವರು ಭಾವಿಸುವುದುಂಟು. ಆದರೆ ಇತರರ ಹೇಳಿಕೆಯನ್ನು ಇವರು ಒಪ್ಪುವುದಿಲ್ಲವೆನ್ನುವವರು, ಇವರ ಹೇಳಿಕೆಯನ್ನು ತಾವು ಒಪ್ಪುವುದಿಲ್ಲವಾದ್ದರಿಂದ ತಾವೇ ಹಟವಾದಿಗಳೆಂದೇಕೆ ಭಾವಿಸಬಾರದು? ಎಂದು ಇವರು ಕೇಳುತ್ತಿದ್ದರು. ತಮ್ಮದೇ ಆದ ಕರ್ತವ್ಯಪಥದಲ್ಲಿ ನಡೆಯಲು ತಾವು ಯತ್ನಿಸುವುದಾಗಿಯೂ ಸ್ವಕರ್ತವ್ಯವನ್ನು ಪಾಲಿಸಬಯಸುವ ಇತರರಿಗೆ ತಾವೆಂದೂ ಅಡ್ಡಬಂದಿಲ್ಲವೆಂದು ಇವರು ನಂಬಿದ್ದರು. 

ವಿವಿಧ ರಾಜಕೀಯ ಪಕ್ಷಗಳಿಂದ ಹುಟ್ಟಿದ ಜನತಾಪಕ್ಷ ಅಂತರಿಕ ವಿರಸ-ಕಚ್ಚಾಟಗಳಿಂದ, ಜನಸಂಘದವರ ದ್ವಿಸದಸ್ಯತ್ವ ಪ್ರಶ್ನೆಯಿಂದ ಮೊರಾರ್ಜಿ ದೇಸಾಯಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಸ್ಥಿತಿಯುಂಟಾಗಿ, ಜನತಾಪಕ್ಷ ಹೋಳಾಯಿತು. ಮೊರಾರ್ಜಿ ಭಾಯ್‍ಅವರಿಗೆ ಸತ್ಯ ಕೇವಲ ಅವಕಾಶವಾದಿ ತತ್ವವಾಗಿರಲಿಲ್ಲ. ಜೀವನಶ್ರದ್ಧೆಯಾಗಿತ್ತು. ಎಂತಹ ಪ್ರಸಂಗದಲ್ಲಿಯೂ ತತ್ವಗಳಿಗೆ ತಿಲಾಂಜಲಿ ಕೊಡಲಿಲ್ಲ.

ಇವರಿಗೆ ಭಾರತ ಸರ್ಕಾರ 1991ರಲ್ಲಿ `ಭಾರತರತ್ನ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಇವರು 1995ರ ಏಪ್ರಿಲ್ 10ರಂದು  ಅವರ 99ನೇ ವಯಸ್ಸಿನಲ್ಲಿ ನಿಧನ ಹೊಂದಿದರು.    				
									(ಜಿ.ಕೆ.ಯು.) (ಕೆ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ